ಬೈಗೆ
ಕ್ಲೂಪಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ಮೂಳೆಮೀನು (ಆಯಿಲ್ ಸಾರ್ಡೀನ್) ಹೆರಿಂಗ್ ಮೀನುಗಳ ಹತ್ತಿರ ಸಂಬಂಧಿಯಾದ ಇದು ಭಾರತದ ಮೀನುಗಾರಿಕೆಯಲ್ಲಿ ಬಹಳ ಪ್ರಾಮುಖ್ಯ ಪಡೆದಿದೆ.  ಬೂತಾಯಿ ಪರ್ಯಾಯನಾಮ.  ಸಾರ್ಡಿನೆಲ ಲಾಂಜಿಸೆಪ್ಸ್ ಇದರ ವೈಜ್ಞಾನಿಕ ಹೆಸರು.

	ಇದು ಅರೇಬಿಯ, ಇರಾನ್, ಪಾಕಿಸ್ತಾನ, ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿ ಮತ್ತು ಅಂಡಮಾನ್ ಸುತಮುತ್ತ ಹಾಗೂ ಜಾವ ಮತ್ತು ಬಾಲಿ ಕರಾವಳಿಗಳಲ್ಲಿ ದೊರೆಯುವುದು.  ಭಾರತದ ಪಶ್ಚಿಮ ಕರಾವಳಿಯಲ್ಲಿ ಮಹಾರಾಷ್ಟ್ರದ ರತ್ನಗಿರಿಯಿಂದ ದಕ್ಷಿಣಕ್ಕೆ ಕೇರಳದ ಕೋಯಿಲೋನ್‍ವರೆಗೆ ಬೈಗೆಯ ಮೀನುಗಾರಿಕೆ ಬಹಳ ಮುಖ್ಯವಾಗಿದೆ.  ಪೂರ್ವ ಕರಾವಳಿಯಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳ ನೆರೆಯ ಸಮುದ್ರದಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿ ಬೈಗೆಯನ್ನು ಹಿಡಿಯಲಾಗಿದೆ.

	ಬೈಗೆ ಮೀನನ್ನು ತಾಜಾ ಆಗಿಯೂ ಹದಮಾಡಿದ ಸ್ಥಿತಿಯಲ್ಲೂ ಆಹಾರವಾಗಿ ಉಪಯೋಗಿಸಲಾಗುತ್ತದೆ.  ಅಲ್ಲದೆ ಇದರ ದೇಹದಲ್ಲಿ ಹೆಚ್ಚಿನ ಮೊತ್ತದಲ್ಲಿರುವ ಎಣ್ಣೆ ಗೋಣಿನಾರು, ತೊಗಲು ಮತ್ತು ಸಾಬೂನು ತಯಾರಿಕೆಯಲ್ಲಿ ಉಪಯುಕ್ತವೆನಿಸಿದೆ.  ಬೈಗೆಮೀನಿನ ಹಿಂಡಿ ತೆಂಗು, ಕಾಫಿ, ಟೀ ಮೊದಲಾದ  ತೋಟಗಳಿಗೆ ಉತ್ತಮ ಗೊಬ್ಬರ, ದೇಹದ ಎಣ್ಣೆಯನ್ನು ದೋಣಿಗಳಿಗೆ ಹಚ್ಚಲೂ ಉಪಯೋಗಿಸುವುದಿದೆ.  ಬೈಗೆ ಸಣ್ಣ ಗಾತ್ರದ ಮೀನು; ಇದರ ದೇಹದ ಉದ್ದ 20 ಸೆಂಮೀ ಮೀರದು.  ಮೈಬಣ್ಣ ಬಂಗಾರದಿಂದ ಕೂಡಿದ ನೀಲಿ, ಹೊಟ್ಟೆ ಮಾತ್ರ ಬಿಳಿ.  ಬೆನ್ನಮೇಲೆ ಒಂದೇ ಒಂದು ಈಜುರೆಕ್ಕೆಯಂಟು.

	ಪಶ್ಚಿಮ ಕರಾವಳಿಯಲ್ಲಿ ಬೈಗೆ ಮೀನು ದೊರೆಯುವ ಶ್ರಾಯ ಮುಂಗಾರು ಮಳೆಯೊಡನೆಯೇ ಪ್ರಾರಂಭವಾಗುವುದು.  ಮೊದಲು ಪ್ರಾಯದ ಮೀನುಗಳು ಕಾಣಿಸಿಕೊಳ್ಳುವುವು.  ಸೆಪ್ಟೆಂಬರ್ ತಿಂಗಳಿನಿಂದ ಜನವರಿ ತಿಂಗಳತನಕ ಮಧ್ಯಮ ಗಾತ್ರದ (12 ರಿಂದ 15 ಸೆಂಮೀ ಉದ್ದದ) ಮೀನುಗಳೇ ಹೆಚ್ಚು ಮೊತ್ತದಲ್ಲಿ ಸಿಕ್ಕುವುವು.  ತರುವಾಯ ಈ ಮೀನಿನ ಬೇಟೆ  ಏಪ್ರಿಲ್ ತಿಂಗಳ ವೇಳೆಗೆ ಸಂಪೂರ್ಣವಾಗಿ ನಿಂತುಹೋಗುವುವು.  ಬೈಗೆ ಮೀನಿನ ಹೆಚ್ಚಳವಿರುವಾಗ ನೀರಿನ ಉಷ್ಣತೆ 27ಡಿಗ್ರಿ _ 29ಡಿಗ್ರಿ ಸೆ. ಮತ್ತು ಲವಣಾಂಶ 33% ರಿಂದ 35%ರ ವರೆಗೆ ಇರುವುದು ಕಂಡುಬರುವುದು.

	ಬೈಗೆ ಮೀನು ಜುಲೈ ತಿಂಗಳಿನಿಂದ, ಸೆಪ್ಟೆಂಬರ್ ತಿಂಗಳತನಕ ಮೊಟ್ಟೆ ಇಡುತ್ತದೆ.  ತನ್ನ ಜೀವಮಾನದಲ್ಲಿ ಈ ಮೀನು ಒಂದೇ ಸಲ ಮೊಟ್ಟೆ ಇಡಬಹುದೆಂದು ನಂಬಲಾಗಿತ್ತು.  ಆದರೆ ಇತ್ತೀಚಿನ ಸಂಶೋಧನೆಗಳಿಂದ ಜೀವಮಾನದಲ್ಲಿ ಎರಡು ಸಲ ಮೊಟ್ಟಯಿಡುವುದೆಂದು ಗೊತ್ತಾಗಿದೆ.  ಇದರ ಬೇಟೆ ಇಲ್ಲಿಯ ತನಕ ಸಾಂಪ್ರದಾಯಿಕ ರೀತಿಯಲ್ಲಿಯೇ ಸಾಗಿದೆ.  ಸಮುದ್ರದ  ದಂಡೆಯಿಂದ ಸಂಕುಚಿತವಾದ ಒಂದು ಭಾಗದಲ್ಲಿ ಮಾತ್ರ.  ಅಂದರೆ 25 ಫಾದಮ್ ರೇಖೆಯೊಳಗೆ ಮಾತ್ರ ಈ ಬೇಟೆ ನಡೆಯುತ್ತದೆ.  ಕೇರಳದಲ್ಲಿ ಮತ್ತಿಕೊಲ್ಲಿವಲ್ಲ; ಪಟ್ಟೆನ್ ಕೊಲ್ಲಿವಲ್ಲ; ಸುಟ್ಟುಂ ವಲ; ಪೈತ್ತು ವಲ ಮುಂತಾದ ದೋಣಿಸಂಚಿ ಬಲೆಗಳನ್ನೂ ಕಿವಿರುಬಲೆಗಳನ್ನೂ ಕರ್ನಾಟಕದ ಕರಾವಳಿವಲ್ಲಿ ರಂಪಣಿ, ಕೈರಂಪಣಿ, ಯೆಂಡಿ ಮುಂತಾದ ಕಿನಾರೆ ಸಂಚಿ ಬಲೆಗಳನ್ನೂ ಬೈಗೆಯ ಬೇಟೆಗೆ ಬಳಸಲಾಗುತ್ತದೆ.										
(ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ